Friday 17 February 2012

ಉಸಿರುಗಟ್ಟಿಸುವಂತೆ ಕಾಡದಿರು


ಉಸಿರುಗಟ್ಟಿಸುವಂತೆ ಕಾಡದಿರು
ಸತ್ತ ಪ್ರೀತಿಯ ಸೂತಕವೇ
ನನ್ನ ಜೀವವ ಬಾಳಗೊಡು
ಮತ್ತಲ್ಲೇ ಚಿಗಿದು ಬೆಳೆಯಲೆಣಿಸದಿರು
ಮರುಜನ್ಮ ಬಯಸುವ ಬಯಕೆಯೇ
ನನ್ನಷ್ಟಕ್ಕೆ ನನ್ನ ಬಿಡು.||ಪ||

ಸಾಲುಗನಸುಗಳ ಹುಚ್ಚು ಮನವೇ
ಕಂಡ ಕನಸು ಕಮರೋ ಮೊದಲೇ
ಮುಂದಿನ ಕನಸಿನ ಗೋಜೇಕೆ.
ಮರಳಿ ಅರಳಬಹುದೇ ಕನಸು
ಎಂದಿತು ಹೃದಯ; ನಿನ್ನ ಜೊತೆಗೆ
ನಿನ್ನದೇ ಇಂತಹ ಜೂಜೇಕೆ||೧||

ಮಾತಾಡಬೇಕಿದ್ದಾಗಲೇ ಉಸಿರೆತ್ತಲಿಲ್ಲ
ಈಗ ಮೌನವೇ ಹಿತವಲ್ಲವೇ
ಯಾರಿಗೆ ಬೇಕು ನಿನ್ನ ಕನವರಿಕೆ.
ಮೌನಕಿರುವ ಸಹನೆ ಮಾತಿಗೆಲ್ಲಿ
ಕಟ್ಟಿದಷ್ಟು ಗಟ್ಟಿಯಾಗುವ ಮೌನವೇ
ಬಿಕ್ಕಿ ಹರಿಯುವ ಬಯಕೆಯಾಕೆ||೨||

ಅನಾದಿ ನೋವಿನ ಬೇಗುದಿಯಿದು
ಕೊರಳಸೆರೆ ಹಿಡಿದರೇನಂತೆ
ಬತ್ತದೆ ಉಮ್ಮಳಿಸುವ ಚಿಲುಮೆ.
ತಡೆಯಲಾರದ ತಾಪವಿದು
ಕರಗಿಹೋಗಿಹವು ಕನಸುಗಳೆಲ್ಲಾ
ಮನದಲಿ ಉನ್ಮಾದದ ಕುಲುಮೆ.||೩||

2 comments:

  1. ಕಾಡದಿದ್ದರೆ ಅದು ಪ್ರೀತಿಯೇ ಅಲ್ಲ ಗೆಳೆಯ. ಗತ ವ್ರಣಗಳ ನಿರಂತರ ಅವ್ಯಕ್ತ ನೋವು ಕಳೆದ ಒಲುಮೆಯ ಸಂಕೇತ.

    ಅಂದಹಾಗೆ ಯಾವುದಾ ಅನಾದಿ ತಂತಿ ಮೀಟುವುದು ನಿಮ್ಮನ್ನ!

    ನನ್ನ ಬ್ಲಾಗಿಗೂ ಸ್ವಾಗತ.

    ReplyDelete
  2. ಭಾವ ತೀವ್ರತೆಯ ಕವನ.... ನಿಜಕ್ಕೂ ತುಂಬಾ ಇಷ್ಟವಾಯ್ತು...

    ReplyDelete